ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಸ್ಐಆರ್ ಅಭಿಯಾನದಲ್ಲಿ ಮನೆಮನೆಗೆ ತೆರಳಿ ಶೇ 99 ರಷ್ಟು ಅರ್ಜಿ ನಮೂನೆಗಳನ್ನು ನೀಡುವ ಗುರಿ ಸಾಧಿಸಲಾಗಿದೆ ಮತ್ತು ಶೇ 30ರಷ್ಟು ಮತದಾರರ ಅರ್ಜಿಗಳನ್ನು ಸ್ವೀಕರಿಸಿ ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ಜೆ ಸೋಮಶೇಖರ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆದ ಬೃಹತ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಎಲ್ಲೆಡೆ ಸಂಬಂಧಿಸಿದ ಅಧಿಕಾರಿಗಳು ನಿರಂತರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಮರ್ಪಕ ಮಾಹಿತಿ ನೀಡಿ ಅರ್ಜಿಯನ್ನು ನೀಡುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಕುಶಾಲನಗರದಲ್ಲಿ ಈ ಸಂಬಂಧ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಅರಿವು ಜಾಗೃತಿ ಮೂಡಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಅನರ್ಹ ಜನರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.
ಕುಶಾಲನಗರ ಬೈಚನಹಳ್ಳಿ ಬಳಿ ಮಾರಿಯಮ್ಮ ದೇವಾಲಯದಿಂದ ಜಾಥಾಕ್ಕೆ ಜಿಲ್ಲಾಧಿಕಾರಿಗಳು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಕಲಾವಿದ ಈ. ರಾಜು ಅವರ ತಂಡದಿಂದ ಬೀದಿ ನಾಟಕ ಮೂಲಕ ಜನರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಅರಿವು ಮೂಡಿಸಲಾಯಿತು.
ಸ್ಥಳೀಯ ಶಾಲಾ ಕಾಲೇಜು ಸ್ಕೌಟ್ಸ್ ಗೈಡ್ಸ್ ರೋಟರಿ, ಫಾತಿಮಾ ಪ್ರೌಢಶಾಲೆ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ ಸಿಬ್ಬಂದಿಗಳು ಮತ್ತು ಪುರಸಭೆ ಪೌರಕಾರ್ಮಿಕರು ಸಿಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳೊಂದಿಗೆ ಜಾಥಾದಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಶ್ನಿ, ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಅಭಿಷೇಕ್ ವಿ, ಅರಣ್ಯ ಇಲಾಖೆ ಪ್ರೊಭೆಷನರಿ ಅಧಿಕಾರಿ ಸೆಂದಿಲ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಆನಂದ್ ಪ್ರಕಾಶ್ ಮೀನಾ,
ತಾಲೂಕು ತಹಸಿಲ್ದಾರ್ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಮತ್ತಿತರ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ಕುಶಾಲನಗರದಲ್ಲಿ ನಡೆದ ಜಾಥಾದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಜಿಲ್ಲಾಧಿಕಾರಿ ಸೋಮಶೇಖರ್ ಮತ್ತು ಹಿರಿಯ ಅಧಿಕಾರಿಗಳು ರಸ್ತೆ ಬದಿಯ ಅಂಗಡಿಗಳಿಗೆ ತೆರಳಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಬಿತ್ತಿ ಪತ್ರಗಳನ್ನು ನೀಡಿ ಅವರಿಗೆ ಅರ್ಜಿ ನಮೂನೆ ಭರ್ತಿ ಮಾಡುವ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಿದರು. ಬೈಚನಹಳ್ಳಿ ಬಳಿಯಿಂದ ಕುಶಾಲನಗರ ಗಣಪತಿ ದೇವಾಲಯ ತನಕ ನಡಿಗೆಯಲ್ಲಿ ಎಲ್ಲರೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.